ಕೇರಳ

ಭಾರತದ ದಕ್ಷಿಣ ತುದಿಯಲ್ಲಿ ಪಶ್ಚಿಮಾಭಿಮುಖವುಳ್ಳ ಒಂದು ರಾಜ್ಯ. ಈ ರಾಜ್ಯದ ಉತ್ತರ, ಪೂರ್ವ ಮತ್ತು ದಕ್ಷಿಣದಲ್ಲಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳೂ ಪಶ್ಚಿಮದಲ್ಲಿ ಅರೇಬಿಯನ್ ಸಮುದ್ರ ಮತ್ತು ಲಕ್ಷದ್ವೀಪ ಸಮುದ್ರ ಸುತ್ತುವರೆದಿವೆ. ಭಾರತ ಪರ್ಯಾಯ ದ್ವೀಪದ ನೈಋತ್ಯದಲ್ಲಿ ಉ.ಅ. 13ಲಿ 40' - 8ಲಿ 20' ನಡುವೆ ಇರುವ ಈ ರಾಜ್ಯದ ಗರಿಷ್ಠ ಅಗಲ 120 ಕಿ.ಮೀ. 14ಜಿಲ್ಲೆಗಳೂ, 1364 ಗ್ರಾಮಗಳೂ 159 ಪಟ್ಟಣ ಮತ್ತು ನಗರಗಳೂ ಇರುವ ಈ ರಾಜ್ಯದ ವಿಸ್ತೀರ್ಣ 38,863 ಚ.ಕಿ.ಮೀ. ಪುರುಷರು 15,468,664 ಮಹಿಳೆಯರು 16,369,955 ಮಂದಿ ಇದ್ದು ಒಟ್ಟು ಜನಸಂಖ್ಯೆ 31,838,619 (2001).

ಭೌತಲಕ್ಷಣ : ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಈ ಪ್ರದೇಶ ಹಿಂದೊಮ್ಮೆ ಬಲು ತಗ್ಗಿನಲ್ಲಿದ್ದು ಕ್ರಮಕ್ರಮವಾಗಿ ಇದಕ್ಕೆ ಉತ್ಕರ್ಷ ಸಂಭವಿಸಿತೆಂಬುದಕ್ಕೆ ಅನೇಕ ಆಧಾರಗಳುಂಟು. ಈಗಿನ ಕಡಲಕೆರೆಯಿಂದ ಹಲವು ಮೈಲಿಗಳಷ್ಟು ದೂರ ಮೆಕ್ಕಲುಮಣ್ಣಿನ ಅಡಿಯಲ್ಲಿ ಹವಳದ ದಿಬ್ಬಗಳಿರುವುದು ವ್ಯಕ್ತವಾಗಿದೆ. ಆದ್ಯ ಐತಿಹಾಸಿಕ ಕಾಲದಲ್ಲಿ ಮಾತ್ರವಲ್ಲದೆ ಐತಿಹಾಸಿಕ ಕಾಲದಲ್ಲಿ ಕೂಡ ನೆಲ ಬೆಳೆಯುತ್ತ ಬಂದುದಕ್ಕೆ ಸಾಹಿತ್ಯಕ ಮತ್ತು ಸ್ಥಳನಾಮಕ ಪುರಾವೆಗಳು ಹಲವುಂಟು. ಎತ್ತರದ ಜಂಬುಮಣ್ಣು ನೆಲ ನಗ್ನೀಕೃತವಾಗಿ ತಗ್ಗುಪ್ರದೇಶದ ಉತ್ಕರ್ಷ ಸಂಭವಿಸಿರಬಹುದು. ಸಾಹಿತ್ಯದಲ್ಲೂ ಐತಿಹ್ಯಗಳಲ್ಲೂ ಇದಕ್ಕೆ ಆಧಾರ ದೊರಕುತ್ತದೆ. ಕಡಲ ಕರೆಯಿಂದ ಎಂಟು ಮೈಲಿಗಳಷ್ಟು ಒಳನಾಡಿನಲ್ಲಿ ಸಾಲಾಗಿ ಹಬ್ಬಿರುವ ಹಳ್ಳಿಗಳ ಹೆಸರುಗಳಲ್ಲಿ ಸಮುದ್ರ ಅಥವಾ ದ್ವೀಪ ಎಂಬುದೂ ಸೇರಿರುವುದು ಸಾಮಾನ್ಯ. ಸಮುದ್ರರೇವುಗಳೆಂದು ಟಾಲೆಮಿ ಹೆಸರಿಸಿರುವ ಕೆಲವು ಸ್ಥಳಗಳು ಇಂದು ಒಳನಾಡಿನಲ್ಲಿವೆ. ಕೊಚ್ಚಿಯ ಹಿನ್ನೀರಿನ ಬಳಿ ಇವನ್ನು ಕಾಣಬಹುದು. ತಗ್ಗುತೀರದ ಬಳಿಯಲ್ಲಿ ಸಂಚಿತವಾದ ಮಣ್ಣಿನಿಂದಾಗಿ ನೆಲ ವಿಸ್ತಾರಗೊಂಡಿದೆಯೆಂಬುದಕ್ಕೆ ನದೀ ಮುಖಗಳ ಆಚೆಗೆ-ಅನೇಕ ವೇಳೆ ಎಂಟು ಮೈಲಿಗಳವರೆಗೂ-ಹಬ್ಬಿರುವ ಮಲಬಾರ್ ಮಣ್ಣೇರಿಗಳೂ ಆಧಾರ ಒದಗಿಸುತ್ತವೆ. ನುಣ್ಣಗೆ ಪುಡಿಯಾದ ಜಂಬುಮಣ್ಣಿನಿಂದ ಕೂಡಿದ ಈ ಏರಿಗಳು ಸಮುದ್ರದ ಉಬ್ಬರವನ್ನು ತಡೆಹಿಡಿದು, ಕರಾವಳಿಯ ಸಣ್ಣ ರೇವುಗಳಿಗೆ ರಕ್ಷಣೆ ಒದಗಿಸುತ್ತವೆ.

	ಮೆಕ್ಕಲುಮಣ್ಣಿನಿಂದ ಕೂಡಿದ ಕರಾವಳಿ, ಜಂಬುಮಣ್ಣಿನ ತಗ್ಗುಪ್ರಸ್ಥಭೂಮಿ ಮತ್ತು ಅಡಿಬೆಟ್ಟ ಪ್ರದೇಶ, ನೈಸ್ ಶಿಲಾವೃತ ಪರ್ವತಶ್ರೇಣಿ-ಹೀಗೆ ಕೇರಳದ ನಾಡನ್ನು ಸ್ಥೂಲವಾಗಿ ಮೂರು ಸ್ವಾಭಾವಿಕ ವಿಭಾಗಗಳಾಗಿ ವಿಂಗಡಿಸಬಹುದು. ಇವುಗಳಲ್ಲಿ ಒಂದೊಂದು ವಿಭಾಗವೂ ಸ್ವಾಭಾವಿಕವಾಗಿ ಮೂರು ಉಪವಿಭಾಗಗಳಾಗಿ ವಿಂಗಡವಾಗುತ್ತದೆ. ಪೌನಯಾರ್ ನದಿಯವರೆಗಿನದು ಒಂದು ಉಪ ವಿಭಾಗ; ಪೌನಯಾರಿನಿಂದ ಪೆರಿಯಾರ್ ನದಿಯವರೆಗಿನದು ಇನ್ನೊಂದು; ಪೆರಿಯಾರಿನಿಂದ ದಕ್ಷಿಣಕ್ಕಿರುವುದು ಮೂರನೆಯದು. ಉತ್ತರ-ದಕ್ಷಿಣವಾಗಿ ವಿಂಗಡಮಾಡಬಹುದಾದ ಮಲಬಾರ್, ಕೊಚ್ಚಿ ಮತ್ತು ತಿರುವಾಂಕೂರು ಪ್ರದೇಶಗಳ ಭೌತಲಕ್ಷಣಗಳನ್ನು ಪ್ರತ್ಯೇಕವಾಗಿ ಪರಿಶೀಲಿಸುವುದು ಹೆಚ್ಚು ಸುಲಭ. ಇತ್ತೀಚಿನವರೆಗೂ ಮೂರು ಪ್ರತ್ಯೇಕ ರಾಜಕೀಯ ವಿಭಾಗಗಳಾಗಿದ್ದ ಈ ಪ್ರದೇಶಗಳಲ್ಲಿ ಒಂದೊಂದೂ ಕೆಲಕೆಲವು ವೈಶಿಷ್ಟ್ಯಗಳಿಂದ ಒಡಗೂಡಿದೆ.

	ಮಲಬಾರ್ ಅಥವಾ ಮಲಯಾಳಂ ಎಂದರೆ ಮಲೆಯ ನೆಲ. ಇದು ಪಶ್ಚಿಮ ಕರಾವಳಿಯ ಅತ್ಯಂತ ಸುಂದರ ಪ್ರದೇಶ; ಪ್ರಕೃತಿ ಸಂಪದ್ಭರಿತ. ಅರಬ್ಬೀ ಸಮುದ್ರದ ಗುಂಟ 240 ಕಿ.ಮೀ. ಉದ್ದಕ್ಕೆ-ದಕ್ಷಿಣ ಕನ್ನಡದಿಂದ ಹಿಡಿದು ದಕ್ಷಿಣದ ಕೊಚ್ಚಿಯವರೆಗೆ ಹಬ್ಬಿರುವ ಈ ಪ್ರದೇಶದ ಪೂರ್ವಕ್ಕಿರುವ ಪಶ್ಚಿಮ ಘಟ್ಟಗಳು ಇದನ್ನು ಕೊಡಗು, ನೀಲಗಿರಿ ಮತ್ತು ಕೊಯಮತ್ತೂರುಗಳಿಂದ ಪ್ರತ್ಯೇಕಿಸಿವೆ. ಇಲ್ಲಿ 1,000'-2,700' ಎತ್ತರವಿರುವ ಪಶ್ಚಿಮಘಟ್ಟಗಳು ಉತ್ತರದಲ್ಲಿ ಕಡಲಕರೆಗೆ ಕೇವಲ 32 ಕಿ.ಮೀ. ದೂರದಲ್ಲಿವೆ. ಕ್ರಮೇಣ ಈ ದೂರ ಹೆಚ್ಚುತ್ತ ಸಾಗುತ್ತದೆ. ಮಲಬಾರಿನ ದಕ್ಷಿಣದ ಕೊನೆಯಲ್ಲಿ ಘಟ್ಟಗಳು ಕಡಲೆಡೆಯಿಂದ 96 ಕಿ.ಮೀ. ದೂರದಲ್ಲಿವೆ. ಅವಿಚ್ಛಿನ್ನವಾಗಿ ಸಾಗಿರುವ ಪರ್ವತಶ್ರೇಣಿಗೆ ತಡೆ ಒದಗಿರುವುದು ಪಾಲಕ್ಕಾಡಿನಲ್ಲಿ. ಈ ಘಾಟಿನ ಅಗಲ 26 ಕಿ.ಮೀ. ಈಶಾನ್ಯದಲ್ಲಿರುವ ವೈನಾಡು 1,000' ಎತ್ತರವಿರುವ ಪ್ರಸ್ಥಭೂಮಿ. ವಾಸ್ತವವಾಗಿ ಇದು ಮೈಸೂರು ಪ್ರಸ್ಥಭೂಮಿಯ ಒಂದು ಭಾಗ. ಇದು ಘಟ್ಟದಿಂದಾಚೆಗೆ ಚಾಚಿರುವ ಪ್ರದೇಶ. ಅಂತೆಯೇ ಅಟ್ಟಪಾಡಿ ಮತ್ತು ಸಿಲೆನ್ ಕಣಿವೆಗಳೂ ಘಟ್ಟದಿಂದಾಚೆಗೆ ಹಬ್ಬಿವೆ. ಮಲಬಾರ್ ಬೆಟ್ಟಗಳ ಅತ್ಯಂತ ಶಿಖರವೆಂದರೆ ವವುಲ್ ಮಲಾ ಅಥವಾ ಒಂಟೆಯ ಡುಬ್ಬು (2,870ಮೀ.) ಅಲ್ಲಿಂದ ಮುಂದೆ ಈ ಶ್ರೇಣಿ ತಗ್ಗುತ್ತ ಸಾಗುತ್ತದೆ.

	ಘಟ್ಟಪ್ರದೇಶ ಬಹುತೇಕ ಅರಣ್ಯಮಯ. ಪರ್ವತದೃಶ್ಯ ಅತ್ಯಂತ ರಮ್ಯವಾಗಿದೆ. ಶಿಖರಗಳೂ ಅತಿ ಕಡಿದು, ದುರ್ಗಮ. ತಗ್ಗಿನ ಪ್ರದೇಶ ಒಂದು ಹಸಿರು ಸಮುದ್ರದಂತಿದೆ. ಕಡಲಕೆರೆಯ ಬಳಿಯಲ್ಲಿ ತೆಂಗಿನ ಮರಗಳ ಸೆರಗಿನಿಂದ ಕೂಡಿದ ಬತ್ತದ ಗದ್ದೆಗಳೂ ಲಗೂನ್‍ಗಳೂ ಹಬ್ಬಿವೆ. ಕರಾವಳಿಯ ಮಟ್ಟಸ ಪ್ರದೇಶ ಸಾಮಾನ್ಯವಾಗಿ 3-4 ಕಿ.ಮೀ. ಗಳಿಗಿಂತ ಅಗಲವಿಲ್ಲ.

	ಮಲಬಾರಿನಲ್ಲಿ ಹರಿಯುವ ಹೊಳೆ ತೊರೆಗಳು ಅಸಂಖ್ಯಾತ. ಇವುಗಳ ಪೈಕಿ ಭವಾನಿ, ಕಪಿಲಾ ಮತ್ತು ರಾಮಪುರ ಇವು ಪೂರ್ವಾಭಿಮುಖವಾಗಿ ಹರಿಯುತ್ತವೆ. ಭವಾನಿ ನದಿ ಅಟ್ಟಪಾಡಿ ಕಣಿವೆಯಲ್ಲಿ ಹುಟ್ಟಿ ಕೊಯಮತ್ತೂರಿನಲ್ಲಿ ಹರಿಯುತ್ತದೆ. ಕಪಿಲಾ ಮತ್ತು ರಾಮಪುರ ವೈನಾಡಿನಲ್ಲಿ ಹುಟ್ಟಿ ಮೈಸೂರಿನಲ್ಲಿ ಪ್ರವಹಿಸುವ ನದಿಗಳು. ಉಳಿದ ನದಿಗಳೆಲ್ಲ ಪಶ್ಚಿಮಾಭಿಮುಖವಾಗಿ ಹರಿದು, ಕಡಲಕೆರೆಗೆ ಸಮದೂರದಲ್ಲಿ ವಿಸ್ತರಿಸಿರುವ ಹಿನ್ನೀರು ಮತ್ತು ಲಗೂನ್‍ಗಳೊಳಕ್ಕೆ ತಮ್ಮ ಜಲರಾಶಿಯನ್ನು ತಂದು ಸುರಿಯುತ್ತವೆ. ಅನೇಕ ನದಿಗಳ, ಕಡಲ ಭರತಕ್ಕೊಳಗಾಗದ ಭಾಗಗಳು ದೋಣಿ ಸಂಚಾರಕ್ಕೆ ಅನುಕೂಲವಾಗಿವೆ. ಹಲವಾರು ಲಗೂನ್‍ಗಳನ್ನು ಸಣ್ಣ ಸಣ್ಣ ಕಾಲುವೆಗಳಿಂದ ಸೇರಿಸಿರುವುದರಿಂದ ಕೇರಳದ ಒಳನಾಡಿನಲ್ಲಿ ಅನೇಕ ಜಲಮಾರ್ಗಗಳು ಏರ್ಪಟ್ಟಿವೆ. ಮಲಬಾರಿನ ನದಿಗಳ ಪೈಕಿ ಅತ್ಯಂತ ಉದ್ದವಾದ್ದು ಪೊನ್ನಾನಿ. ಆದರೆ ಅತ್ಯಂತ ಮುಖ್ಯವಾದ ನದಿಗಳೆಂದರೆ ಬೇಪೊರೆ ಮತ್ತು ವಲಾರ್ ಪಟ್ಟಣಂ. ಈ ಮೂರೂ ನದಿಗಳು ವಿಸ್ತಾರವಾದ ಹಿನ್ನೀರುಗಳೊಂದಿಗೆ ಕೂಡಿಕೊಂಡಿವೆ.

	ಮಲಬಾರ್ ಸಮುದ್ರತೀರ ಬಹುತೇಕ ತೆರೆದಂತಿದೆ. ಅತ್ಯಂತ ಉತ್ತರದಲ್ಲಿ ಮಾತ್ರ ಜಂಬುಮಣ್ಣಿನಿಂದ ಕೂಡಿದ ದಿಬ್ಬವಿರುವ ದ್ವೀಪವೊಂದುಂಟು. ಇದಕ್ಕೆ ಡೆಲ್ಲಿ ಗುಡ್ಡವೆಂದು ಹೆಸರು. ಪೋರ್ಚುಗೀಸರ ಹಡಗುಗಳ ದೃಷ್ಟಿಗೆ ಮೊಟ್ಟಮೊದಲು ಬಿದ್ದ ಭಾರತೀಯ ನೆಲವಿದು. ಇಲ್ಲಿಂದ ದಕ್ಷಿಣಕ್ಕೆ, ಕೋಳಿಕ್ಕೋಡ್‍ನ ವರೆಗೆ, ತೀರದಲ್ಲಿ ಅಲ್ಲಲ್ಲಿ ಜಂಬುಮಣ್ಣಿನ ದಿಣ್ಣೆಗಳ ಮತ್ತು ಮರಳುಗುಪ್ಪೆಗಳ ನಡುನಡುವೆ ಆಳವಿಲ್ಲದ ಸಣ್ಣ ಕೊಲ್ಲಿಗಳುಂಟು. ಕಡಲಕೆರೆಯಿಂದ 5 ಕಿ.ಮೀ. ದೂರದವರೆಗೂ ಸಮುದ್ರ ಆಳವಾಗಿಲ್ಲ. ಅಲ್ಲಿಂದ ಒಮ್ಮೆಗೇ 1,000 ಫ್ಯಾದಂ ಆಳವಾಗುತ್ತದೆ.

	ಕೊಚ್ಚಿಯ ಪ್ರದೇಶದಲ್ಲಿ ಘಟ್ಟ, ಮೈದಾನ ಮತ್ತು ಕಡಲಕರೆ ಎಂದು ಮೂರು ಸ್ವಾಭಾವಿಕ ವಿಭಾಗಗಳುಂಟು. ಘಟ್ಟ ಪ್ರದೇಶ ಕೊಚ್ಚಿಯ ಅರ್ಧಭಾಗವನ್ನಾವರಿಸಿದೆ. ತೇಗ ಮುಂತಾದ ಅಮೂಲ್ಯ ಮರಗಳಿಂದ ತುಂಬಿರುವ ಘಟ್ಟಶ್ರೇಣಿ ಕಡಿದು, ಇದರ ಬದಿಯಲ್ಲಿರುವ ಮೈದಾನದಲ್ಲಿ ಅಡ್ಡಲಾಗಿ ಅನೇಕ ಹೊಳೆಗಳು ಹರಿಯುತ್ತವೆ. ಪಶ್ಚಿಮದ ಕಡಲಕರೆಯ ಉದ್ದಕ್ಕೂ ಹಬ್ಬಿರುವ ಹಿನ್ನೀರುಗಳುಂಟು. ಹಿನ್ನೀರುಗಳಿಗೂ ಸಮುದ್ರಕ್ಕೂ ನಡುವೆ ಇರುವ ಉದ್ದನೆಯ ಕಿರು ಏರಿಯಲ್ಲಿ ತೆಂಗಿನ ಮರಗಳು ಸಾಮಾನ್ಯ. ಮಳೆಗಾಲದಲ್ಲಿ ಈ ಪ್ರದೇಶದಲ್ಲೆಲ್ಲ ನೀರು ತುಂಬಿರುತ್ತದೆ.

	ಕೊಚ್ಚಿ ಪ್ರದೇಶದ ಮುಖ್ಯ ನದಿಗಳು ಆಲುವಾ, ಚಾಲಕ್ಕುಡಿ, ಕುರುಮಾಲಿ ಅಥವಾ ಕುರುವಣ್ಣೂರ್, ಪೌನಾಯ್ ಮತ್ತು ಅಣ್ಣಾಮಲೈ. ಆಲುವಾ ನದಿ ಕೊಚ್ಚಿಯಲ್ಲಿ ಕೆಲವು ಕಿಲೋಮೀಟರುಗಳ ದೂರ ಮಾತ್ರ ಕ್ರಮಿಸುತ್ತದೆ. ಚಾಲಕ್ಕುಡಿ ನದಿ ಕೊಡಸೆರಿ ಅರಣ್ಯ ಪ್ರದೇಶದಲ್ಲಿ ಉದ್ಭವವಾಗಿ ಕ್ರಾಂಗನೂರಿನ ಬಳಿ ಹಿನ್ನೀರಿನಲ್ಲಿ ಸಂಗಮಿಸುತ್ತದೆ. ಕುರುಮಾಲಿ ನದಿ ಮಣಾಲಿಯನ್ನು ಸೇರಿದ ಮೇಲೆ ಕುರುವಣ್ಣೂರ್ ಎಂದು ಹೆಸರು ತಳೆದು ಪರವತ್ತಣಿ ಮತ್ತು ಪಾಲಪಳ್ಳಿ ಅರಣ್ಯಗಳಲ್ಲಿ ಹರಡಿಕೊಳ್ಳುತ್ತದೆ. ಪೌನಾಯ್ ಅನೇಕ ಉಪನದಿಗಳಿಂದ ಕೂಡಿ ಮಲಬಾರ್-ಕೊಚ್ಚಿಗಳ ನಡುರೇಖೆಯಲ್ಲಿ ಪ್ರವಹಿಸುತ್ತದೆ. ಅಣ್ಣಾಮಲೈ ಅಥವಾ ಚಿತ್ತೂರ್ ನದಿ ಕೊಯಮತ್ತೂರು ಮತ್ತು ಮಲಬಾರುಗಳ ಮೂಲಕ ಹರಿದು ಕೊಚ್ಚಿಯ ಮೂಲಕವೂ ಹಾದುಹೋಗುತ್ತದೆ.

	ಕೊಚ್ಚಿ ಪ್ರದೇಶದಲ್ಲಿ ವಿಸ್ತಾರವಾದ ಲಗೂನ್ ಮತ್ತು ಹಿನ್ನೀರುಗಳ ಜೊತೆಗೆ ಎರಡು ದೊಡ್ಡ ಸಿಹಿನೀರಿನ ಸರೋವರಗಳೂ ಉಂಟು. ಒಂದಕ್ಕೊಂದು ಕೂಡಿದಂತಿರುವ ಇವುಗಳ ಹೆಸರುಗಳು ಎನಮಕ್ಕಲ್ ಮತ್ತು ಮನಕ್ಕೋಡಿ. ಈ ಸರೋವರಗಳು ಹಿನ್ನೀರುಗಳಿಗೆ ತೆರೆದುಕೊಂಡಂತಿವೆ. ಬೇಸಗೆಯಲ್ಲಿ ಇವುಗಳಲ್ಲಿ ನೀರು ಬತ್ತಿದಾಗ ಇವಕ್ಕೆ ಉಪ್ಪುನೀರು ಬಂದು ಸೇರದಂತೆ ತಡೆಯಲು ಏರಿಗಳನ್ನು ಕಟ್ಟಲಾಗಿದೆ. ಆ ಕಾಲದಲ್ಲಿ ಇಲ್ಲಿ ಬತ್ತ ಬೆಳೆಯುತ್ತಾರೆ.

	ಕೊಚ್ಚಿಗೆ ದಕ್ಷಿಣದಲ್ಲಿರುವ ತಿರುವಾಂಕೂರು ಅಥವಾ ತಿರುವಳಂಕೋಡಿಯ ಪೂರ್ವಕ್ಕೂ ಪಶ್ಚಿಮ ಘಟ್ಟಗಳು ಹಬ್ಬಿವೆ. ಈಶಾನ್ಯದಲ್ಲಿ ಅಣೈಮುಡಿ ಎಂಬುದು ಅತ್ಯುನ್ನತ ಶಿಖರ. ಇದರ ಸುತ್ತ ಗೊಂಚಲಿನಂತಿರುವ ಶಿಖರ ಸಮೂಹಕ್ಕೆ ದಕ್ಷಿಣದಲ್ಲಿ ಏಲಕ್ಕಿ ಬೆಟ್ಟಗಳು ಮತ್ತು ಪಿರ್ಮೆಡ್‍ಗಳಿವೆ.  ಇವುಗಳ ನಡುವೆ ಇರುವ ಪ್ರಸ್ಥಭೂಮಿಯ ಗರಿಷ್ಠ ಎತ್ತರ 1,700ಮೀ. ಈ ಶ್ರೇಣಿಯ ಉಳಿದ ಭಾಗದಲ್ಲಿ ಅಲ್ಲಲ್ಲಿ ಉನ್ನತ ಶಿಖರಗಳುಂಟು. ಅಗಸ್ತ್ಯಮಲೈ ಮತ್ತು ಮಹೇಂದ್ರ ಗಿರಿಗಳು ಇವುಗಳಲ್ಲಿ ಮುಖ್ಯವಾದುವು. ಘಟ್ಟಗಳಿಂದ ಅಲ್ಲಲ್ಲಿ ಶಾಖೆಗಳೊಡೆದು ಸಮುದ್ರ ಸನಿಯದವರೆಗೂ ಸಾಗುತ್ತವೆ. ಕೊಲ್ಲಂನಿಂದ ದಕ್ಷಿಣಕ್ಕೆ ಘಟ್ಟದ ಶಾಖೆಗಳು ತಗ್ಗಾಗುತ್ತ ಸಾಗಿ ಕಣಿವೆಗಳನ್ನು ಹಾಯ್ದು ಕರಗಿಹೋಗುತ್ತವೆ.

	ತಿರುವಾಂಕೂರು ಪ್ರದೇಶದ ಸುಮಾರು ಅರ್ಧಭಾಗ ಪರ್ವತಮಯವಾಗಿರುವುದರಿಂದ ಇಲ್ಲಿ ಹರಿಯುವ ನದಿಗಳೂ ಹೊಳೆಗಳೂ ಅನೇಕ. ಅವು ಸುತ್ತಿ ಹರಿದು, ಸಮುದ್ರವನ್ನೋ ಹಿನ್ನೀರುಗಳನ್ನೋ ಸೇರುತ್ತವೆ. ಪೆರಿಯಾರ್ (ದೊಡ್ಡ ನದಿ) ಅವುಗಳಲ್ಲೆಲ್ಲ ದೊಡ್ಡದು. ಇದು ದೇವಿಕೊಳಂಗೆ 96 ಕಿ.ಮೀ. ದಕ್ಷಿಣಕ್ಕೆ, ಶಿವಗಿರಿ ಅರಣ್ಯದ ನಡುವೆ 1,000 ಮೀ. ಎತ್ತರದಲ್ಲಿ ಉಗಮಿಸಿ, ಉತ್ತರಾಭಿಮುಖವಾಗಿ ಹರಿದು, ಪಶ್ಚಿಮಕ್ಕೆ ಬಾಗಿ ಕೋಡುಗಲ್ಲುಗಳ ಮೇಲೆ ಜಿಗಿದು ಆಲುವಾವನ್ನು ತಲಪಿ, ಎರಡಾಗಿ ಕವಲೊಡೆಯುತ್ತದೆ. ಉತ್ತರದ ಕವಲು ಪಳ್ಳಿಪುರಂನಲ್ಲಿ ಸಮುದ್ರದಲ್ಲಿ ಸಂಗಮಿಸುತ್ತದೆ. ದಕ್ಷಿಣದ ಕವಲು ಎರ್ನಾಕುಲಂಗೆ ಪಶ್ಚಿಮದಲ್ಲಿ ಹಿನ್ನೀರಿನಲ್ಲಿ ಒಂದಾಗುತ್ತದೆ. ಪೆರಿಯಾರಿನ ಉದ್ದ 177 ಕಿ.ಮೀ. ಈ ನದಿಯ ಶಿರೋ ಭಾಗದಲ್ಲಿ ಕಟ್ಟಿರುವ ಪೆರಿಯಾರ್ ಕಟ್ಟೆಯಿಂದ ತಮಿಳುನಾಡಿನ ಮಧುರೈ ಜಿಲ್ಲೆಗೆ ನೀರಾವರಿ ಸೌಲಭ್ಯ ಒದಗಿದೆ.

	ತಿರುವಾಂಕೂರು ಪ್ರದೇಶದ ಪಶ್ಚಿಮ ಕರಾವಳಿಯಲ್ಲೂ ಅನೇಕ ಹಿನ್ನೀರ ಹರವುಗಳುಂಟು. ಇವಕ್ಕೂ ಸಮುದ್ರಕ್ಕೂ ನಡುವೆ 1/2 ಕಿ.ಮೀ. ನಿಂದ 11 ಕಿ.ಮೀ. ವರೆಗೆ ಅಗಲವಾಗಿರುವ ಮರಳು ದಂಡೆಯಿದೆ. ಹಿನ್ನೀರುಗಳಲ್ಲಿ ಸತತವಾಗಿ ಬಂದು ತುಂಬುವ ನದಿಗಳ ನೀರು ಈ ದಂಡೆಯನ್ನು ಅಲ್ಲಲ್ಲಿ ಕೊರೆದು ಸಮುದ್ರ ಸೇರುತ್ತದೆ. ಕಡಲು ಉಕ್ಕಿದಾಗ ಅದರ ನೀರು ದಂಡೆಯ ಮೇಲೆ ಹರಿದು ಹಿನ್ನೀರುಗಳ ನೀರಿನ ಮಟ್ಟ ಸುಮಾರು 2/3 ಮೀ. ಹೆಚ್ಚುವುದುಂಟು. ಹಿನ್ನೀರುಗಳನ್ನೆಲ್ಲ ಸೇರಿಸಲು ಅಲ್ಲಲ್ಲಿ ಕಾಲುವೆಗಳನ್ನು ತೋಡಲಾಗಿರುವುದರಿಂದ ಅವು ನೌಕಾ ಸಂಚಾರಕ್ಕೆ ಉಪಯುಕ್ತವಾಗಿವೆ. ಈ ಪ್ರದೇಶದಲ್ಲೂ ಕೆಲವು ಸಿಹಿನೀರು ಸರೋವರಗಳುಂಟು. 

	ವಾಯುಗುಣ : ಕೇರಳದ ವಾಯುಗುಣ ಸಮಭಾಜಕೀಯ ವಾಯುಗುಣವನ್ನು ಹೋಲುತ್ತದೆ. ಗರಿಷ್ಠ ಉಷ್ಣತೆ 90ಲಿ ಫ್ಯಾ. ನ್ನು (32ಲಿ ಸೆಂ.) ಮೀರುವುದು ಅಪರೂಪ. ಕನಿಷ್ಠ ಉಷ್ಣತೆಗಳೂ ಸಾಮಾನ್ಯವಾಗಿ 70ಲಿ ಫ್ಯಾ. ಗಿಂತ (21ಲಿ ಸೆಂ.) ಕಡಿಮೆಯಾಗುವುದಿಲ್ಲ. ಪರ್ವತ ಪ್ರದೇಶದಲ್ಲಿ ಮಳೆ ಅಧಿಕ. ಉಳಿದ ಕಡೆ ಉತ್ತರದಿಂದ ದಕ್ಷಿಣಕ್ಕೆ ಹೋದಂತೆ ಕಡಿಮೆಯಾಗುತ್ತದೆ. ಉತ್ತರದಲ್ಲಿ 120" (3,008 ಮಿ.ಮೀ.) ಮಳೆಯಾದರೆ ತಿರುವನಂತಪುರದ ಬಳಿ ಅದರಲ್ಲಿ ಅರ್ಧ. ಇನ್ನೂ ದಕ್ಷಿಣಕ್ಕೆ 2/3ಕ್ಕೆ ಇಳಿಯುತ್ತದೆ. 2003ರಲ್ಲಿ 2288ಮೀಮೀ ಮಳೆಯಾಗಿತ್ತು.
ಕೃಷಿ ಮತ್ತು ಇತರ ಕಸಬುಗಳು : ಕೇರಳದ ನೆಲದಲ್ಲಿ ಸುಮಾರು 1/5 ಭಾಗ ಅರಣ್ಯಾವೃತವಾದ್ದು. ಉಳಿದ ಭಾಗದಲ್ಲಿ ಕೃಷಿಯೋಗ್ಯವಾದ ನೆಲದ ಬಹುತೇಕ ಭಾಗ ಸಾಗುವಳಿಗೆ ಬಂದಿದೆ. ಬತ್ತ ಮುಖ್ಯ ಬೆಳೆ. ಆದರೆ ಅತ್ಯಂತ ದಕ್ಷಿಣದಲ್ಲಿ ಅದಕ್ಕೆ ಉಳಿದೆಡೆಯಲ್ಲಿದ್ದಷ್ಟು ಪ್ರಾಮುಖ್ಯವಿಲ್ಲ (40%). ನೀರಾವರಿ ಸೌಲಭ್ಯ ಇರುವಲ್ಲಿಗೆ ಅದು ಸೀಮಿತವಾಗಿದೆ. ಹಿನ್ನೀರಿನ ಪ್ರದೇಶಗಳಲ್ಲಿಯ ಮುಖ್ಯ ಸಮಸ್ಯೆಯೆಂದರೆ ನೀರಾವರಿಯಲ್ಲ, ನೀರಿನ ನಿವಾರಣೆ. ಇದಕ್ಕಾಗಿ ತಲಾ ಸುಮಾರು 50 ಎಕರೆಗಳ ತುಕಡಿಗಳ ಸುತ್ತ ಕಾಲುವೆ ತೋಡಿ ಅದರ ಆಚೀಚೆ ಬದಿಗೆ ಏರಿ ಕಟ್ಟಲಾಗುತ್ತದೆ. ಜುಲೈಯಿಂದ ಸೆಪ್ಟೆಂಬರ್-ಅಕ್ಟೋಬರ್‍ವರೆಗೆ ಈ ನೆಲ ನೀರಿನಲ್ಲಿ ಮುಳುಗಿರುವುದುಂಟು. ಮಳೆಗಾಲ ಮುಗಿದ ಮೇಲೆ ಜಮೀನಿನ ನೀರನ್ನು ಪರ್ಷಿಯನ್ ಚಕ್ರದ ಅಥವಾ ಪಂಪಿನ ಸಹಾಯದಿಂದ ಎತ್ತಿ ಕಾಲುವೆಯಲ್ಲಿ ಹರಿಯಿಸಿ, ಸಾಗುವಳಿ ಮಾಡಲಾಗುತ್ತದೆ. ಕಾಲುವೆಯ ಏರಿ ಒಡೆದು ಜಮೀನಿಗೆ ನೀರು ನುಗ್ಗಿದಾಗ ದೋಣಿಯಿಂದ ಪೈರ ತೆನೆಯ ಕುಯಿಲು ಮಾಡಲಾಗುತ್ತದೆ. ಕೊಚ್ಚಿ-ಮಲಬಾರ್‍ಗಳ ಹಿನ್ನೀರು ಪ್ರದೇಶದಲ್ಲಿ ಸಮುದ್ರದ ಉಪ್ಪುನೀರಿನ ಪ್ರಭಾವ ಇರುವುದುಂಟು. ಇಂಥೆಡೆಗಳಲ್ಲಿ ಒಂದು ಅಡಿ ಎತ್ತರ ಮತ್ತು ಐದು ಅಡಿ ಸುತ್ತಳತೆಯ ದಿಬ್ಬಗಳನ್ನು ನಿರ್ಮಿಸಿ ಅವುಗಳಲ್ಲಿ ಬತ್ತವನ್ನು ಬಿತ್ತುತ್ತಾರೆ. ಮುಂಗಾರು ಆರಂಭವಾದಾಗ ಹೊಸ ನೀರು ಹಳೆಯ ಉಪ್ಪುನೀರನ್ನು ಕೊಚ್ಚಿ ಹಾಕುತ್ತದೆ. ಸಸಿಯನ್ನು ನಾಟಿ ಹಾಕಲು ಅದು ಸೂಕ್ತ ಕಾಲ. ಈ ಪದ್ಧತಿಯಲ್ಲಿ ಫಸಲು ಕೈಗೆ ಸಿಕ್ಕೇಸಿಕ್ಕುವುದೆಂಬ ಭರವಸೆಯೇನೂ ಇರುವುದಿಲ್ಲ. ಆದರೆ ಕೇರಳದಲ್ಲಿ ಜನಸಂಖ್ಯೆಯ ಒತ್ತಡ ಅತ್ಯಂತ ಅಧಿಕವಾಗಿರುವುದರಿಂದ ಇಂಥ ಅನಿಶ್ಚಿತ ಪರಿಸ್ಥಿತಿಯಲ್ಲೂ ಬೇಸಾಯ ಸಾಗುತ್ತದೆ.

	ಹಿನ್ನೀರಿನ ಪ್ರದೇಶದ ಪೂರ್ವಕ್ಕಿರುವ ಮೈದಾನದಲ್ಲಿಯ ಸಾಗುವಳಿಯ ವಿಧಾನ ಭಾರತದ ಬೇರೆಡೆಗಳಲ್ಲಿರುವಂಥದೇ. ಆದರೆ ಮುಂಗಾರು ಶೀಘ್ರವಾಗಿ ಬರುವುದರಿಂದ ಏಪ್ರಿಲ್-ಮೇ ವೇಳೆಗೆ ಬಿತ್ತನೆ ಮಾಡಿ ಸೆಪ್ಟೆಂಬರ್ ವೇಳೆಗೆ ಫಸಲು ತೆಗೆಯುತ್ತಾರೆ. ಮಳೆಗಾಲ ಮುಂದುವರಿದರೆ ಎರಡನೆಯ ಬೆಳೆ ತೆಗೆಯುವುದೂ ಉಂಟು.

	ಬತ್ತವನ್ನು ಬಿಟ್ಟರೆ ತೆಂಗು ಮುಖ್ಯ ಫಸಲು. ಕರಾವಳಿಯ ಮರಳು ನೆಲದಲ್ಲಿ ಇದು ಸಾಮಾನ್ಯ. ಆದರೆ ಒಳನಾಡಿನಲ್ಲೂ ಇದು ಬೆಳೆಯುತ್ತದೆ. ತಿರುವಾಂಕೂರು ಪ್ರದೇಶದಲ್ಲಿ ಬತ್ತ ಬೆಳೆಯುವಷ್ಟೇ ಜಮೀನು ತೆಂಗಿಗೂ ಮೀಸಲಾಗಿದೆ. ಕೊಲ್ಲಂನಲ್ಲಿ ತೆಂಗೇ ಪ್ರಧಾನ. ಅಕ್ಕಿಯನ್ನು ಬಿಟ್ಟರೆ ತೆಂಗೇ ಕೇರಳದ ಜನರ ಮುಖ್ಯ ಆಹಾರ. ನಾರು, ಕೊಬ್ಬರಿ, ಎಣ್ಣೆ, ಹಿಂಡಿ-ಇವು ತೆಂಗಿನ ಕೆಲವು ಉತ್ಪನ್ನಗಳು. ಅದರ ಕಾಂಡವನ್ನು ಕೊರೆದು ಹಾಕಿ ದೋಣಿಯಾಗಿ ಉಪಯೋಗಿಸುತ್ತಾರೆ. ಅದರ ಗರಿಯೂ ನಾನಾ ಉಪಯೋಗಗಳಿಗೆ ಬರುತ್ತದೆ. ತೆಂಗಿನಿಂದ ಬೆಲ್ಲ, ಸಕ್ಕರೆ, ಹೆಂಡ, ಸಾರಾಯಿಗಳನ್ನೂ ತಯಾರಿಸುತ್ತಾರೆ.

	ಕೇರಳದ ಕೈಗಾರಿಕಾ ಕೆಲಸಗಾರರಲ್ಲಿ ಮೂರನೆಯ ಒಂದು ಭಾಗದ ಜನ ತೆಂಗಿನ ಉತ್ಪನ್ನಗಳಿಗೆ ಸಂಬಂಧಿಸಿದ ಉದ್ಯಮಗಳಲ್ಲಿ ಕೆಲಸ ಮಾಡುವರು. ಇವರಲ್ಲಿ ಮೂರನೆಯ ಎರಡು ಭಾಗ ಹೆಂಗಸರು. ತೆಂಗಿನ ಹುರಿ ತಯಾರಿಕೆ ಬಹುತೇಕವಾಗಿ ಗೃಹ ಕೈಗಾರಿಕೆ. ಇದನ್ನು ಚಾಪೆಗಳಾಗಿ (ಮ್ಯಾಟಿಂಗ್) ಹೆಣೆಯುವ ಹಲವಾರು ಸಣ್ಣ ಕಾರ್ಖಾನೆಗಳಿವೆ.

	ರಬ್ಬರ್, ಚಹ, ಮರಗೆಣಸು, ಮೆಣಸು-ಇವು ಇತರ ಮುಖ್ಯ ಬೆಳೆಗಳು. ರಬ್ಬರ್ ಮತ್ತು ಚಹ ತೋಟಗಳು ಇರುವುದು ಘಟ್ಟಗಳ ಮೇಲೆ. ಅಡಿಬೆಟ್ಟಗಳ ಪ್ರದೇಶದಲ್ಲಿ ಮರಗೆಣಸು ಮತ್ತು ಮೆಣಸು ಬೆಳೆಯುತ್ತವೆ. ಬತ್ತ ಬಿಟ್ಟರೆ ಬೇರೆ ಧಾನ್ಯಗಳ ಬೆಳೆ ಬಲು ಕಡಿಮೆ. ಜೋಳ, ರಾಗಿ, ಬೆಳೆ, ಕಬ್ಬು, ಮೆಣಸಿನಕಾಯಿ-ಇವು ಇತರ ಕೆಲವು ಬೆಳೆಗಳು. ಬತ್ತ ಬೆಳೆಯುವೆಡೆಗಳಲ್ಲಿ ಕೆಲವು ಕಡೆ ಎಳ್ಳನ್ನು ಮೂರನೆಯ ಬೆಳೆಯಾಗಿ ಬೆಳೆಯುವುದುಂಟು. ಬಾಳೆ ಮತ್ತು ಇತರ ಹಣ್ಣುಗಿಡಗಳು ಪ್ರತಿಯೊಂದು ಮನೆಯ ಹಿತ್ತಲಿನಲ್ಲೂ ಬೆಳೆಯುತ್ತವೆ. ಎಳ್ಳು, ವೀಳೆಯದೆಲೆ, ಅಡಕೆಗಳೂ ಅಲ್ಲಲ್ಲಿ ಕಾಣಬರುತ್ತದೆ. ಮರಗೆಣಸು ಕೇರಳದಲ್ಲಿ ಬಡವರ ಬೆಳೆ. ಈ ಬೆಳೆಯನ್ನು ಕೇರಳದಲ್ಲಿ 1920ರಲ್ಲಿ ಆರಂಭಿಸಲಾಯಿತು.

	ಮತ್ಸೋದ್ಯಮ ಕೇರಳದ ಮುಖ್ಯ ಜೀವನೋಪಾಯ. ಆದರೆ ತಾಂತ್ರಿಕವಾಗಿಯೂ ಸಂಘಟನೆಯ ದೃಷ್ಟಿಯಿಂದಲೂ ಇದು ಇನ್ನೂ ಬಹಳ ಹಿಂದುಳಿದಿದೆ. ಇದನ್ನು ಆಧುನಿಕಗೊಳಿಸುವ ಭಾರತ-ನಾರ್ವೀಜಿಯನ್ ಯೋಜನೆಯೊಂದು ಜಾರಿಯಲ್ಲಿದೆ.

	ಜೇಡಿ, ಜಂಬುಮಣ್ಣು, ಲಿಗ್ನೈಟ್ ಇವನ್ನು ಬಿಟ್ಟರೆ ಇಲ್ಮೆನೈಟ್, ಮೊನಾಜೈಟ್ ಜಿರ್ಕಾನ್ ಇವು ಕೇರಳದ ಖನಿಜಗಳು.

	1967-68ರಲ್ಲಿ ಕೇರಳದ ಮುಖ್ಯ ಬೆಳೆಗಳು, ಅವುಗಳನ್ನು ಬೆಳೆಯುತ್ತಿದ್ದ ನೆಲ, ಉತ್ಪಾದನೆ ಇವನ್ನು ಕುರಿತ ವಿವರಗಳು ಈ ರೀತಿ ಇವೆ :

ಬೆಳೆ
ಜಮೀನಿನ ವಿಸ್ತೀರ್ಣ (ಹೆಕ್ಟೇರ್‍ಗಳಲ್ಲಿ)
ಉತ್ಪಾದನೆ (ಟನ್‍ಗಳಲ್ಲಿ)

01
ಅಕ್ಕಿ
8,09,544
11,23,897

02
ಇತರ ಧಾನ್ಯಗಳು
6,569
3,058

03
ಬೇಳೆಗಳು
42,632
16,743

04
ಕಬ್ಬು
8,033
49,973

05
ಶುಂಠಿ(ಒಣ)
11,795
11,117

06
ಅರಸಿನ (ಒಣ)
14,443
3,725

07
ಬಾಳೆಕಾಯಿ
8,785
64,008

08
ಬಾಳೆ ಹಣ್ಣು
40,633
3,10,274

09
ಮರಗೆಣಸು
2,97,646
41,98,357

10
ಎಳ್ಳು
11,163
2,629

11
ನೆಲಗಡಲೆ
13,714
24,675

12
ಕಪ್ಪು ಮೆಣಸು
99,702
21,064

13
ಗೋಡಂಬಿ
94,990
1,06,578

14
ಏಲಕ್ಕಿ
47,026
1,606

15
ತೆಂಗು
6,38,722
3,593

16
ವೀಳೆಯದೆಲೆ
76,044
11,473

17
ಹತ್ತಿ
6,625
6,461

18
ಚಹ
39,282
43,189

19
ಕಾಫಿ
26,468
11,458

20
ರಬ್ಬರ್
1,62,932
59,978

21
ಹೊಗೆಸೊಪ್ಪು
698
902

	ತೆಂಗಿನ ಬೆಳೆಗೆ ಕೇರಳ ಹೆಸರಾದದ್ದು. ಈ ಹಣದ ಬೆಳೆ ಜೊತೆಗೆ ವಿವಿಧ ಬಗೆಯ ಬಾಳೆಯಹಣ್ಣುಗಳು, ಅನಾನಸ್, ಮಾವು, ಹಲಸು ಮುಂತಾದ ಫಲಗಳನ್ನು ಬೆಳೆಯುತ್ತಾರೆ. 2002-03ನೇ ಸಾಲಿನಲ್ಲಿ 3,10,521 ಲಕ್ಷ ಹೆಕ್ಟೇರ್‍ನಲ್ಲಿ ಬತ್ತವನ್ನು ಬೆಳೆಯಲಾಗಿತ್ತು. ತೆಂಗು ಮತ್ತು ಅದರ ವಿವಿಧ ಉತ್ಪನ್ನಗಳು ಗ್ರಾಮೀಣ ಜನತೆಗೆ ಆರ್ಥಿಕ ಬೆಂಬಲನೀಡುತ್ತಿದೆ. 3.5 ಮಿಲಿಯನ್ ಜನರು ಇದನ್ನು ಅವಲಂಬಿಸಿದ್ದಾರೆ. ಮೆಣಸು ಇಲ್ಲಿಯ ಮತ್ತೊಂದು ಮುಖ್ಯ ವಾಣಿಜ್ಯ ಬೆಳೆ. 2002-03ರಲ್ಲಿ 731 ಕೆ.ಜಿ.ಯಂತೆ ಪ್ರತಿ ಹೆಕ್ಟೇರ್ ಭೂಮಿಯಲ್ಲಿ ಗೋಡಂಬಿಯನ್ನು ಬೆಳೆಯಲಾಗಿತ್ತು. ದೇಶದ ಒಟ್ಟು ರಬ್ಬರ್ ತೋಟದಲ್ಲಿ ಶೇ.84 ಭಾಗ ಕೇರಳದಲ್ಲಿಯೇ ಇದ್ದು 2002-03ರಲ್ಲಿ 5.95 ಲಕ್ಷ ಟನ್‍ಗಳ ರಬ್ಬರನ್ನು ಪಡೆಯಲಾಗಿತ್ತು. ಹಾಗೆ ಕಾಫಿ 0.64 ಮೆ.ಟನ್‍ಗಳಷ್ಟು ಬೆಳೆಯಲಾಗಿತ್ತು. ಟೀ ಸರ್ಕಾರಿ ಹೊರವಲಯ ಮುದ್ರಣಾಲಯ ಇಲ್ಲಿಯ ಒಂದು ಮುಖ್ಯ ಆರ್ಥಿಕ ಬೆಳೆ ತೋಟಗಳಲ್ಲಿ 84,000 ಕ್ಕಿಂತಲೂ ಹೆಚ್ಚು ಕಾರ್ಮಿಕರು ದುಡಿಯುತ್ತಿದ್ದಾರೆಂದು ತಿಳಿದು ಬಂದಿದೆ.

	ಕೇರಳದ ಮುಖ್ಯ ಅರಣ್ಯ ಪ್ರದೇಶ ಆ ರಾಜ್ಯದ ಪೂರ್ವದ ಅಂಚಿನಲ್ಲಿ ಘಟ್ಟಗಳ ಬದಿಗೆ ದಕ್ಷಿಣೋತ್ತರವಾಗಿ ಹಬ್ಬಿದೆ. 1968-69ರಲ್ಲಿ ಅರಣ್ಯದಿಂದ ಬಂದ ಆದಾಯ ರೂ.8,28,48,741 ; ಅದಕ್ಕಾಗಿ ಮಾಡಲಾದ ವೆಚ್ಚ ರೂ.2,84,54,137. ಮರದ ದಿಮ್ಮಿ, ಸೌದೆ, ಬೊಂಬು, ಜೊಂಡು, ದಂತ, ಇವು ಮುಖ್ಯ ಅರಣ್ಯೋತ್ಪನ್ನಗಳು. 

	ಕೇರಳದ ಮುಖ್ಯ ವಿದ್ಯುದ್ಯೋಜನೆಗಳಿವು : 1 ಪಳ್ಳಿವಾಸಲ್ : ದೇವಿಕೊಳಂನಲ್ಲಿ ಎತ್ತರದ ಪರ್ವತಶ್ರೇಣಿಗಳ ನಡುವೆ ನಿರ್ಮಿತವಾಗಿರುವ ಈ ಜಲವಿದ್ಯುಜ್ಜನಕ ಕೇಂದ್ರದ ಸ್ಥಾಪಿತ ಸಾಮಥ್ರ್ಯ 37,500 ಕಿವಾ. ; 1968-69ರಲ್ಲಿ ಆದ ಉತ್ಪತ್ತಿ 2,073.5 ಲಕ್ಷ ಯೂನಿಟ್. 2 ಸೆಂಗುಳಂ ವಿದ್ಯುತ್ ಯೋಜನೆ ; ಪಳ್ಳಿವಾಸಲ್‍ನ ಕೆಳಗಡೆಗೆ, ವೆಳ್ಳತ್ತುವಲ್‍ನಲ್ಲಿ ಸ್ಥಾಪಿತವಾಗಿರುವ ಈ ಕೇಂದ್ರದ ಸ್ಥಾಪಿತ ಸಾಮಥ್ರ್ಯ 48,000 ಕಿವಾ.; 1968-69ರ ಉತ್ಪತ್ತಿ 1,277.5 ಲಕ್ಷ ಯೂನಿಟ್. 3 ಪೆರಿಙÐಲ್ ಕುತ್ತು ಜಲವಿದ್ಯುತ್ ಯೋಜನೆ : ಚಾಲಕ್ಕುಡಿ ನದಿಯ ಮೇಲೆ ಪೆರಿಙÐಲ್ ಕುತ್ತುವಿನಲ್ಲಿ ತ್ರಿಚೂರ್ ಜಿಲ್ಲೆಯಲ್ಲಿ ಸ್ಥಾಪಿತವಾಗಿದೆ. ಸ್ಥಾಪಿತ ಸಾಮಥ್ರ್ಯ 32,000 ಕಿ.ವಾ. ; ಉತ್ಪಾದನೆ 1,755.5 ಲಕ್ಷ ಯೂನಿಟ್. 4 ನೆರಿಯಮಂಗಲಂ ಜಲವಿದ್ಯುತ್ ಯೋಜನೆ : ಪೆರಿಯಾರ್ ನದಿಯ ಬಲದಂಡೆಯ ಮೇಲೆ ಪನಂಕುಟ್ಟಿಯಲ್ಲಿ ನಿರ್ಮಿತ. ಸ್ಥಾಪಿತ ಸಾಮಥ್ರ್ಯ 45,000 ಕಿ.ವ್ಯಾ ; ಉತ್ಪಾದನೆ 2,175,9 ಲಕ್ಷ ಯೂನಿಟ್. 5 ಪನ್ನಿಯಾರ್ ಯೋಜನೆ : ಮುದಿರಪುಳ ನದಿಯ ಎಡದಂಡೆಯ ಮೇಲೆ ಸೆಂಗುಳಂ ಕೇಂದ್ರಕ್ಕೆ ಸರಿ ಸುಮಾರು ಎದುರುಬದಿಯಲ್ಲೆ ನಿರ್ಮಿತವಾಗಿವೆ. ಸ್ಥಾಪಿತ ಸಾಮಥ್ರ್ಯ 30,000 ಕಿ.ವಾ. ; ಉತ್ಪಾದನೆ 727.5 ಲಕ್ಷ ಯೂನಿಟ್. 6 ಶಬರಗಿರಿ ಯೋಜನೆ : ಪಂಬ ಮತ್ತು ಕಕ್ಕಿ ನದಿಗಳ ನೀರಿನಿಂದ ವಿದ್ಯುತ್ತನ್ನು ಉತ್ಪಾದಿಸುವುದು ಈ ಯೋಜನೆಯ ಉದ್ದೇಶ. ಸ್ಥಾಪಿತ ಸಾಮಥ್ರ್ಯ 3,00,000 ಕಿ.ವ್ಯಾ. 7. ಇಡಿಕ್ಕಿ ಯೋಜನೆ : ಕೇರಳದಲ್ಲೇ ಅತಿ ದೊಡ್ಡ ಜಲ ವಿದ್ಯುತ್ ಯೋಜನೆ. ಇದಕ್ಕೆ ಕೆನಡಾದ ನೆರವು ಲಭ್ಯವಾಗಿದೆ. ಸ್ಥಾಪಿತ ಸಾಮಥ್ರ್ಯ 7,80,000 ಕಿ.ವ್ಯಾ. ಇರುತ್ತದೆ. ಕೋಟ್ಟಯಂ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ಪೆರಿಯಾರ್ ನದಿಯ ಮೇಲೆ ನಿರ್ಮಿತವಾಗುತ್ತಿರುವ ಈ ಯೋಜನೆಯಿಂದ ತೊಡಪುಳ, ಮಿನಚ್ಚಿಲ್, ಮತ್ತು ವೈಕ್ಕಂ ತಾಲ್ಲೂಕುಗಳಲ್ಲಿ 1,15,000 ಎಕರೆಗಳಿಗೆ ನೀರಾವರಿ ಸೌಲಭ್ಯ ಒದಗುತ್ತದೆ. 8 ಕುಟ್ಟಿಯಾಡಿ ಯೋಜನೆ : ಮಲಬಾರ್ ಜಿಲ್ಲೆಯಲ್ಲಿ ಕುಟ್ಟಿಯಾಡಿ ನದಿಯ ಮೇಲೆ ನಿರ್ಮಿಸಲಾಗುವ ವಿದ್ಯುತ್‍ಜನಕ ಕೇಂದ್ರದ ಸ್ಥಾಪಿತ ಸಾಮಥ್ರ್ಯ 75,000 ಕಿ.ವ್ಯಾ. ಇರುತ್ತದೆ. 2003ರಲ್ಲಿ ಕೇರಳದ ವಿದ್ಯುದುತ್ಪಾದನೆ 2608 ಮೆ.ವಾ ಆಗಿದೆ.

	ಮಲಂಪುಳ (47,600 ಎಕರೆ) ವಾಳಯಾರ್ (8,000 ಎಕರೆ), ಮಂಗಲಂ (8,000ಎಕರೆ), ಪಳನಿ(8,810ಎಕರೆ) ಮತ್ತು ಪೀಚಿ(43,380 ಎಕರೆ)-ಇವು ಈಗಾಗಲೇ ಸಂಪೂರ್ಣವಾಗಿರುವ ನೀರಾವರಿ ಯೋಜನೆಗಳು. ಚಾಲಕ್ಕುಡಿ ಯೋಜನೆಯ ಪ್ರಥಮ (28,400 ಎಕರೆ) ಮತ್ತು ದ್ವಿತೀಯ (20,250 ಎಕರೆ) ಹಂತ ಮುಗಿದಿದೆ. ಗಾಯತ್ರಿ, ಕಲ್ಲಡ, ಪಂಬ, ಕುಟ್ಟಿಯಾಡಿ, ಕಾಂಜಿರಪ್ಪುಳ, ಪಳಾಸಿ, ಪೋತುಂಡಿ ಚೇರಕ್ಕುಳಿ ಪೆರಿಯಾರ್ ಕಣಿವೆ ಯೋಜನೆಗಳು ನಿರ್ಮಾಣವಾಗಿ ಕೆಲವು ಹೊಸ ಯೋಜನೆಗಳನ್ನು ಕೈಗೆತ್ತಿ ಕೊಳ್ಳಲಾಗಿದೆ.

	ತೆಂಗಿನ ನಾರಿನ ವಸ್ತುಗಳು, ಜವಳಿ, ಚಹ, ರಬ್ಬರ್, ಇಟ್ಟಿಗೆ, ಹೆಂಚು, ರಾಸಾಯನಿಕ ಗೊಬ್ಬರ, ರಾಸಾಯನಿಕಗಳು, ವಿದ್ಯುತ್ ಉಪಕರಣ, ಗೋಡಂಬಿ ಸಂಸ್ಕರಣ, ಮುದ್ರಣ, ಸಕ್ಕರೆ, ಮರಕೊಯ್ತ, ಪ್ಲೈವುಡ್, ಬೆಂಕಿಕಡ್ಡಿ, ಅಕ್ಕಿ ಗಿರಣಿ, ಕೈಮಗ್ಗ, ಕುಶಲ ಕಸಬು, ಎಣ್ಣೆ ತಯಾರಿಕೆ-ಇವು ರಾಜ್ಯದ ಮುಖ್ಯ ಕೈಗಾರಿಕೆಗಳು. ರಬ್ಬರ್, ಪ್ಲೈವುಡ್, ರಾಸಾಯನಿಕ ಗೊಬ್ಬರ, ರಾಸಾಯನಿಕಗಳು, ರೇಯಾನ್, ಗಾಜು, ಕಾಗದ, ಅಲ್ಯೂಮಿನಿಯಂ, ಸಕ್ಕರೆ, ಸಿಮೆಂಟ್, ಜವಳಿ, ಟಿಟಾನಿಯಂ ಡೈಯಾಕ್ಸೈಡ್, ಸಾಬೂನು, ಷಾರ್ಕ್‍ಲಿವರ್ ಎಣ್ಣೆ, ಕುಂಭಕಲೆ, ಎಂಜಿನಿಯರಿಂಗ್, ಕೇಬಲ್, ಪೆನ್‍ಸ್ಟಾಕ್, ತಂತಿಹಗ್ಗ, ಭಾರಿ ಟ್ರಾನ್ಸ್‍ಫಾರ್ಮರ್, ನೂಲುಯಂತ್ರ, ಡಿ.ಡಿ.ಟಿ, ಯಂತ್ರೋಪಕರಣ, ಪೆಟ್ರೋಲಿಯಂ ಉತ್ಪನ್ನ-ಇವು ರಾಜ್ಯದ ಮುಖ್ಯ ಬೃಹದ್ಗಾತ್ರ ಕೈಗಾರಿಕೆಗಳು. ತ್ರಿವೇಂದ್ರಂ ರಬ್ಬರ್ ಕಾರ್ಖಾನೆ, ತ್ರಿವೇಂದ್ರ ನೂಲುವ ಗಿರಣಿ, ಮೃಣ್ವಸ್ತು ಸಂಸ್ಥೆ, ಕೇರಳ ವಿದ್ಯುತ್ ಮತ್ತು ತತ್ಸಂಬಂಧ ಎಂಜಿನಿಯರಿಂಗ್ ಕಂಪನಿ, ತಿರುವಾಂಕೂರು ಪ್ಲೈವುಡ್ ಕೈಗಾರಿಕೆ, ಕೇರಳ ಸಾಬೂನು ಮತ್ತು ಎಣ್ಣೆ ಸಂಸ್ಥೆ-ಇವು ಸರ್ಕಾರಿ ಉದ್ಯಮಗಳು.

	ಶಿಕ್ಷಣ : 1967-68ರಲ್ಲಿದ್ದಂತೆ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿದ್ದ ವಿದ್ಯಾರ್ಥಿಗಳ ಸಂಖ್ಯೆ 44,52,637 (ಬಾಲಕರು 23,92,030, ಬಾಲಕಿಯರು 20,60,607). ಜನಸಂಖ್ಯೆಯಲ್ಲಿ ಶೇಕಡಾ33.26 ಮಂದಿ ವಿದ್ಯಾರ್ಥಿಗಳು. 1961ರ ಜನಗಣತಿಯ ಪ್ರಕಾರ ಸಾಕ್ಷರರು ಒಟ್ಟು ಜನಸಂಖ್ಯೆಯ ಶೇಕಡ 46.8ರಷ್ಟಿದ್ದರು. ಕೇರಳ ಭಾರತದ ರಾಜ್ಯಗಳಲ್ಲೇ ಅತ್ಯಂತ ಹೆಚ್ಚಿನ ಸಾಕ್ಷರರಿರುವ ರಾಜ್ಯವಾಗಿದೆ 2001 ರ ಅಂಕಿ ಅಂಶದಂತೆ ಶೇ.90.92 ಮಂದಿ ಅಕ್ಷರಸ್ಥರಿದ್ದರು.

ತಿರುವನಂತಪುರ ಮತ್ತು ಕೋಳಿಕ್ಕೋಡ್‍ಗಳು ಕ್ರಮವಾಗಿ ಕೇರಳ ಮತ್ತು ಕೋಳಿಕ್ಕೋಡ್ ವಿಶ್ವವಿದ್ಯಾಲಯಗಳ ಕೇಂದ್ರಗಳು. ಕೊಚ್ಚಿ ವಿಶ್ವವಿದ್ಯಾಲಯ ಮತ್ತು ಕೃಷಿ ವಿಶ್ವವಿದ್ಯಾಲಯ ಇವು ಕೇರಳದ ಇನ್ನೆರಡು ವಿಶ್ವವಿದ್ಯಾಲಯಗಳು.
ಪಟ್ಟಣಗಳು : ಕೇರಳದ ಬಹುತೇಕ ಪಟ್ಟಣಗಳು ರೇವುಗಳು; ಅಥವಾ ಹಿನ್ನೀರುಗಳ ದಂಡೆಗಳ ಮೇಲೆ ನೆಲಸಿವೆ. ಪೂರ್ವ ಪಶ್ಚಿಮ ದೇಶಗಳ ವ್ಯಾಪಾರಿಗಳು ಬಹು ಹಿಂದಿನಿಂದಲೂ ಈ ರಾಜ್ಯದ ಜನರೊಂದಿಗೆ ವ್ಯಾಪಾರದಲ್ಲಿ ನಿರತರಾಗಿದ್ದರು. ಅರಬರೂ ಗ್ರೀಕೋ-ರೋಮನರೂ ಚೀನೀಯರೂ ಇಲ್ಲಿಯ ಸಂಬಾರ ಪದಾರ್ಥದಿಂದ ಆಕರ್ಷಿತರಾಗಿದ್ದರು. ಅನಂತರ ಪೋರ್ಚುಗೀಸರಿಗೂ ಇತರ ಐರೋಪ್ಯ ದೇಶಗಳವರಿಗೂ ಮುಸ್ಲಿಮರಿಗೂ ನಡುವೆ ಈ ಪ್ರದೇಶದ ವ್ಯಾಪಾರಕ್ಕಾಗಿ ಸ್ಪರ್ಧೆ ನಡೆದಿತ್ತು. ಕಣ್ಣನ್ನೂರು ಜಿಲ್ಲೆಯ ತೆಲಚ್ಚೇರಿಯಿಂದ ಕೊಡಗಿನ ಕಾಫಿಯೂ ಸ್ವಲ್ಪ ಮೆಣಸೂ ಕೊಬ್ಬರಿಯೂ ರಫ್ತಾಗುತ್ತವೆ. ಕೋಳಿಕ್ಕೋಡ್ ಕೂಡ ಇವುಗಳ ರಫ್ತಿನಲ್ಲಿ ಭಾಗವಹಿಸುತ್ತದೆ. ಇವೆರಡು ಬಂದರುಗಳಲ್ಲೂ ಹಡಗುಗಳು ಸಮುದ್ರದಂಡೆಯಿಂದ ಸು. 3-4 ಕಿ.ಮೀ. ದೂರದಲ್ಲಿ ನಿಲ್ಲುತ್ತವೆ.

	ಕೊಚ್ಚಿ ಮುಖ್ಯ ಬಂದರು. ಭಾರತದಲ್ಲಿ ಐರೋಪ್ಯರು ನೆಲಸಿದ ಮೊಟ್ಟ ಮೊದಲ ಸ್ಥಳ. ಇದರ ಸನ್ನಿವೇಶ ಅತ್ಯಂತ ಪ್ರಾಮುಖ್ಯ ಉಳ್ಳದ್ದು. ಇದು ಹಿನ್ನೀರುಗಳ ಪ್ರದೇಶದ ನಡುವೆ ನೆಲಸಿದೆ. ಪಾಲಕ್ಕಾಡು ತೆರವು ಇರುವುದು ಇದರ ಈಶಾನ್ಯಕ್ಕೆ 125 ಮೈ. ದೂರದಲ್ಲಿ. ಏಡನಿಗೂ ಮುಂಬಯಿಗೂ ಇರುವ ದೂರಕ್ಕಿಂತ ಏಡನ್-ಕೊಚ್ಚಿಗಳ ನಡುವಣ ದೂರ 483 ಕಿ.ಮೀ. ಗಳಷ್ಟು ಕಡಿಮೆ. ಇದು ಕೊಲಂಬೊದೊಂದಿಗೆ ಕೂಡ ಯಶಸ್ವಿಯಾಗಿ ಸ್ಫರ್ಧಿಸಬಲ್ಲುದು. ಸೂಯೆಜ್ ಕಾಲುವೆಯ ಮೂಲಕ ಸಾಗಬಲ್ಲ ಯಾವ ಹಡಗಾದರೂ ನಿಲ್ಲುವುದು ಸಾಧ್ಯವಾಗುವಂತೆ ಇಲ್ಲಿ ಬಂದರು ನಿರ್ಮಾಣವಾಗಿದೆ. ಹಿನ್ನೀರಿಗೆ ಅಡ್ಡಲಾಗಿ ರೈಲ್ವೆ ಮತ್ತು ರಸ್ತೆ ಸೇತುವೆಗಳಿವೆ. ಪಾಲಕ್ಕಾಡ್-ಕೊಚ್ಚಿ ರೈಲುಮಾರ್ಗದ ಮೂಲಕ ಕೊಚ್ಚಿಯೊಂದಿಗೆ ಅದರ ಹಿನ್ನಾಡಿನ ಸಂಪರ್ಕ ಸಾಧಿಸಿದೆ. ತೆಂಗಿನ ನಾರಿನ ವಸ್ತುಗಳು, ಕೊಬ್ಬರಿ, ಚಹ, ರಬ್ಬರ್, ಗೋಡಂಬಿ ಇವು ಮುಖ್ಯ ನಿರ್ಯಾತಗಳು. ಕೊಚ್ಚಿಯಲ್ಲಿ ಹಡಗು ನಿರ್ಮಾಣ ಕೇಂದ್ರ ಸ್ಥಾಪಿಸುವ ಕೆಲಸ ಸಾಗುತ್ತಿದೆ. ಎರ್ನಾಕುಲಂನಲ್ಲಿ ಸಾಬೂನಿನ ಕಾರ್ಖಾನೆಗಳುಂಟು. ಮಟ್ಟನ್‍ಚೇರಿಯಲ್ಲಿ ಅಕ್ಕಿಗಿರಣಿಗಳಿವೆ. ಈ ಎಲ್ಲ ಸ್ಥಳಗಳೂ ಇರುವುದು ಕೊಚ್ಚಿ ವಲಯದಲ್ಲೇ. 

	ಹಳೆಯ ತಿರುವಾಂಕೂರು ಪ್ರದೇಶದಲ್ಲಿ ಹೆಚ್ಚು ಪಟ್ಟಣಗಳಿಲ್ಲ. ತಿರುವನಂತಪುರದ ಬಹು ಮುಖ್ಯ. ಇದು ಕೇರಳದ ರಾಜಧಾನಿ. ಆಲಪ್ಪುಳ ಮತ್ತು ಕೊಲ್ಲಂ ಪುರಾತನ ಪ್ರಸಿದ್ಧ ಬಂದರುಗಳು. ಈಗ ಇವುಗಳ ಪ್ರಾಮುಖ್ಯ ತಗ್ಗಿದೆ. ತಿರುವನಂತಪುರ-ಮಂಗಳೂರು ರೈಲು ಮಾರ್ಗದಲ್ಲಿ ಕೊಲ್ಲಂ ಒಂದು ಸಂಧಿ ಸ್ಥಳ. ಇಲ್ಲಿಂದ ತಮಿಳುನಾಡಿಗೆ ರೈಲ್ವೆ ಸಂಪರ್ಕವುಂಟು. ಕೊಲ್ಲಂನಲ್ಲೂ ಆಲಪ್ಪುಳದಲ್ಲೂ ಗೋಡಂಬಿ ಕಾರ್ಖಾನೆಗಳಿವೆ.

ಕ್ರಮ
ಸಂಖ್ಯೆ
ಜಿಲ್ಲೆಗಳು
ವಿಸ್ತೀರ್ಣ ಚ.ಕಿ.ಮೀ
ಜನಸಂಖ್ಯೆ (2001)
ಆಡಳಿತ ಕೇಂದ್ರ

 1
 2
 3
 4
 5
 6
 7
 8
 9
10
11
12
13
14
ತಿರುವನಂತಪುರಂ
ಕೊಲ್ಲಂ
ಪಥನಂತಿಟ್ಟ
ಅಲಪುಜû
ಕೊಟ್ಟಾಯಂ
ಇಡುಕ್ಕಿ
ಎರ್ನಾಕುಲಂ
ತಿರುಶ್ಶೂರ್
ಪಲಕ್ಕಾಡ್
ಮಲಪುರಂ
ಕೋಳಿಕೋಡ್
ವೈನಾಡ್
ಕಣ್ಣೂರ್
ಕಾಸರಗೋಡ್
2,192
2,491
2,642
1,414
2,203
5,019
2,407
3,032
4,480
3,550
2,324
2,132
2,996
4,992
32,34,707
25,84,118
12,31,577
21,05,349
19,52,901
11,28,605
30,98,378
29,75,440
26,17,072
36,29,640
28,78,498
7,86,627
24,12,365
12,03,342
ತಿರುವನಂತಪುರಂ
ಕೊಲ್ಲಂ
ಪಥನಂತಿಟ್ಟ
ಅಲಪುಜû
ಕೊಟ್ಟಾಯಂ
ಪೈನವು
ಎರ್ನಾಕುಲಂ
ತಿರುಶ್ಶೂರ್
ಪಲಕ್ಕಾಡ್
ಮಲಪುರಂ
ಕೋಳಿಕೋಡ್
ಕಲಪೆಟ್ಟ
ಕಣ್ಣೂರ್
ಕಾಸರಗೋಡ್

	
	ರಾಜ್ಯದಲ್ಲಿ 448 ಕಿ.ಮೀ. ರಾಷ್ಟ್ರೀಯ ಹೆದ್ದಾರಿಗಳೂ 2,470 ಕಿ.ಮೀ. ರಾಜ್ಯ ಹೆದ್ದಾರಿಗಳೂ 6,658 ಕಿ.ಮೀ. ಜಿಲ್ಲಾ ರಸ್ತೆಗಳು 5,644 ಕಿ.ಮೀ. ಗ್ರಾಮಾಂತರ ರಸ್ತೆಗಳೂ ಇವೆ. ಜಲಮಾರ್ಗಗಳ ಉದ್ದ 1,116 ಮೈ. ಕೊಚ್ಚಿ ದೊಡ್ಡ ಬಂದರು. ಆಲಪ್ಪುಳ್ಳ ಕೋಳಿಕ್ಕೋಡ್‍ಗಳು ಮಧ್ಯಮ ಗಾತ್ರದ ಬಂದರುಗಳು. ತಿರುವನಂತಪುರ, ಕೊಲ್ಲಂ, ಕೋಯಿಲ್ ತೋಟಂ, ಪೊನ್ನಾನಿ, ಬಡಗರ, ತಲಚ್ಚೇರಿ, ಕಣ್ಣನ್ನೂರು, ಅಳಿಕ್ಕಲ್ ಮತ್ತು ಕಾಸರಗೋಡು ಸಣ್ಣ ಬಂದರುಗಳು.
ರಾಜ್ಯದ ಮುಖ್ಯ ಭಾಷೆ ಮಲಯಾಳಂ, ತಮಿಳು ಕನ್ನಡ ಭಾಷೆಗಳನ್ನಾಡುವವರೂ ಅಧಿಕ ಸಂಖ್ಯೆಗಳಲ್ಲಿದ್ದಾರೆ.   

 (ಪಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ